ಸಮಂತಭದ್ರ
	ಸು. 450. ದಕ್ಷಿಣದೇಶದ ಪ್ರಸಿದ್ಧ ಜೈನ ಆಚಾರ್ಯ,  ಕವಿ, ಗಮಕಿ, ವಾದಿ ಮತ್ತು ವಾಗ್ಮಿ ಎಂದು ಪ್ರಖ್ಯಾತರಾದವರು. ಚಾವುಂಡರಾಯ ತನ್ನ ಚಾವುಂಡರಾಯಪುರಾಣದಲ್ಲಿ ಇವರನ್ನು ಸ್ತುತಿಸಿದ್ದಾನೆ. ಶ್ರವಣಬೆಳಗೊಳದ ಒಂದು ಶಾಸನದಲ್ಲಿ ಸಮಂತಭದ್ರರನ್ನು ಇವರು ಭಸ್ಮಕ ರೋಗವನ್ನು ನಾಶಮಾಡಿಕೊಂಡು ಪದ್ಮಾವತೀದೇವಿ ಯಿಂದ ಉದಾತ್ತವಾದ ಪದವನ್ನು ಹೊಂದಿ ಮಂತ್ರಶಕ್ತಿಯಿಂದ ಚಂದ್ರ ಪ್ರಭಜಿನನನ್ನು ಆಹ್ವಾನಮಾಡಿ ಕಲಿಯುಗದಲ್ಲಿ ಜಿನಧರ್ಮಕ್ಕೆ ಪ್ರಾಶಸ್ತ್ಯ ವನ್ನುಂಟುಮಾಡಿದರು. ವಾದಕ್ಕೋಸ್ಕರ ಪಾಟಲೀಪುತ್ರನಗರ, ಮಾಳವದೇಶ, ಸಿಂಧುದೇಶ, ಠಕ್ಕದೇಶ, ಕಾಂಚೀಪುರ, ವಿದಿಶೆ, ಕರಹಾಟಕ ದೇಶಗಳಲ್ಲಿ ಸಂಚಾರಮಾಡಿದರು. ಇವರು ವಾದಕ್ಕೆ ನಿಂತರೆ ಈಶ್ವರನಿಗೂ ನಾಲಗೆ ಬರುತ್ತಿರಲಿಲ್ಲ ಎಂದು ಹೇಳಿದೆ. ಇವರು ಮಣಕವಳ್ಳಿಯಲ್ಲಿ ತಪಸ್ಸು ಮಾಡಿದಂತೆ ದೇವಚಂದ್ರನ ರಾಜಾವಳೀ ಕಥೆಯಲ್ಲಿ ಹೇಳಿದೆ. ಶ್ವೇತಾಂಬರ ವೀರ ವಂಶಾವಳಿಯಲ್ಲಿ ಇವರು ಮಹಾವೀರನ ನಿರ್ವಾಣವಾದ 889ನೆಯ ವರ್ಷದಲ್ಲಿ ಅಂದರೆ, 419ರಲ್ಲಿ ಇದ್ದರೆಂದು ಹೇಳಿದೆ. ಇವರು ಉರಗಪುರದ ರಾಜಮನೆತನದವರೆಂದೂ ನಿಗ್ರ್ರಂಥ ಮುನಿಗಳಾಗಿ ದೇಶದ ಹಲವು ಭಾಗಗಳಲ್ಲಿ ವಿಹಾರ ಮಾಡಿದರೆಂದೂ ಹೇಳಿಕೆಯುಂಟು. ಹಲವು ಸಂಸ್ಕøತ ಮತ್ತು ಕನ್ನಡ ಕವಿಗಳು ಇವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ವಾದಿಮುಖ್ಯರಾಗಿ ಪರವಾದಿಗಳನ್ನು ಜಯಿಸಿ ಸ್ಯಾದ್ವಾದ ಜಿನಶಾಸನವನ್ನು ಹರಡಿಸಿದ ಹಿರಿಮೆ ಇವರದು. ತಪಃಸಾಮಥ್ರ್ಯದಿಂದ ತೀವ್ರಗಮನಶಕ್ತಿ ಇವರಲ್ಲಿತ್ತೆಂದು ಹೇಳಿಕೆಯುಂಟು. ಇವರು ತಮ್ಮ ಮುನಿಜೀವನದಲ್ಲಿ ಎಷ್ಟೋ ಕಷ್ಟನಷ್ಟಗಳನ್ನು ಸಹಿಸಿದರೆಂದು ಹೇಳುವ ಕಥೆಗಳು ದೊರೆಯುತ್ತವೆ. ಮುಂದೆ ಇವರು ತೀರ್ಥಂಕರರಾಗಿ ಹುಟ್ಟುವರೆಂಬ ಪರಂಪರೆ ಇವರ ಘನತೆಯನ್ನು ತೋರಿಸುತ್ತದೆ.

	ಇವರು ಆಪ್ತಮೀಮಾಂಸೆ, ಯುಕ್ತ್ಯನುಶಾಸನ, ಸ್ವಯಂಭೂ ಸ್ತೋತ್ರ, ಜಿನಸ್ತುತಿ, ರತ್ನಕರಂಡಕ, ಶ್ರಾವಕಾಚಾರ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವು ಸಂಸ್ಕøತದಲ್ಲಿದ್ದು (ಪದ್ಯ) ತರ್ಕ ಶೈಲಿಯಲ್ಲಿ ರಚಿತವಾಗಿವೆ. ಇವಲ್ಲದೆ ಜೀವಸಿದ್ಧಿ, ತತ್ತ್ವಾನುಶಾಸನ, ಪ್ರಮಾಣ ಪದಾರ್ಥ, ಕರ್ಮಪ್ರಾಭೃತ ಟೀಕೆ, ಗಂಧಹಸ್ತಿ, ಮಹಾಭಾಷ್ಯ ಮೊದಲಾದ ಗ್ರಂಥಗಳನ್ನು ಬರೆದ ಆಖ್ಯಾಯಿಕೆಗಳೂ ಸಂದರ್ಭಗಳೂ ದೊರೆಯುತ್ತವೆ. ಆದರೆ ಈ ಕೃತಿಗಳು ದೊರೆತಿಲ್ಲ.

	ಆಪ್ತಮೀಮಾಂಸೆಯಲ್ಲಿ ಆಪ್ತನ ವಿಷಯದ ಚರ್ಚೆಯಿದೆ. ದೇವಾಗಮ ಎಂಬ ಶಬ್ದಗಳಿಂದ ಆರಂಭವಾಗುವುದರಿಂದ ಇದನ್ನು ದೇವಾಗಮ ಸ್ತೋತ್ರವೆಂದೂ ಕರೆಯುತ್ತಾರೆ. ಇದಕ್ಕೆ ಅಕಲಂಕನ ಅಷ್ಟತತೀ, ವಿದ್ಯಾನಂದನ ಅಷ್ಟಸಹಸ್ರೀ, ಯಶೋವಿಜಯನ ಅಷ್ಟಾದಶಸಹಸ್ರೀ ಎಂಬ ಟೀಕೆಗಳು ರಚಿತವಾಗಿವೆ. ಯುಕ್ತ್ಯನುಶಾಸನದಲ್ಲಿ 64 ಪದ್ಯಗಳಿವೆ. ಇದರಲ್ಲಿ ಅನ್ಯಮತ ಖಂಡನವನ್ನು ಮಾರ್ಮಿಕವಾಗಿ ಮಾಡಲಾಗಿದೆ. ಈ ಗ್ರಂಥವನ್ನು ಕುರಿತು ವಿದ್ಯಾನಂದ ಒಂದು ಟೀಕೆಯನ್ನು ಬರೆದಿದ್ದಾನೆ. ಸ್ವಯಂಭೂಸ್ತೋತ್ರದಲ್ಲಿ ಇಪ್ಪತ್ನಾಲ್ಕು ತೀರ್ಥಂಕರರ ಸ್ತುತಿಯಿದೆ. ಅಲ್ಲದೆ, ಅನೇಕ ಪೌರಾಣಿಕ ಮತ್ತು ನ್ಯಾಯದ ಸಂದರ್ಭಗಳೂ ಇದರಲ್ಲಿವೆ. ಈ ಕೃತಿಯ ಶೈಲಿ ಪ್ರೌಢವಾಗಿದೆ. ಜಿನಸ್ತುತಿ ಅಲಂಕಾರಯುಕ್ತಸ್ತುತಿ ಗ್ರಂಥ. ರತ್ನಕರಂಡಕ ಶ್ರಾವಕಾಚಾರ 150 ಸಂಸ್ಕøತ ಆರ್ಯಾಪದ್ಯಗಳಲ್ಲಿ ಶ್ರಾವಕರ ಆಚಾರವನ್ನು ಸುಗಮವಾಗಿ ನಿರೂಪಿಸುವ ಒಂದು ಚಿಕ್ಕ ಕೃತಿ. 			
		(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ